ಎದೆ ಸೆರಬಿಗಿತ

	ಗುಂಡಿಗೆಯ ಮುಖ್ಯ ಪೋಷಕಗಳಾದ ಕಿರೀಟಿಕ ಧಮನಿಗಳಲ್ಲಿ (ಕಾರೊನರಿ ಆರ್ಟರೀಸ್) ರಕ್ತದ ಹರಿವಿನ ಕೊರೆಯಾದಾಗ, ಕೊಂಚ ಶ್ರಮದಿಂದಲೇ ಎದೆಯಲ್ಲಿ ತೋರುವ ನೋವಿನ ಶೂಲೆಯ ಕೆರಳಿಕೆ (ಅಂಜೈನಪೆಕ್ಟೂರಿಸ್). ಇದ್ದಕ್ಕಿದ್ದ ಹಾಗೆ, ಪ್ರಾಣಸಂಕಟವೆಂಬಂತೆ ಎದೆಯಲ್ಲಿ ಗುಂಡಿಗೆ ಇರುವೆಡೆಯ ಮೇಲೆ, ಸರಕ್ಕನೆ ನೋವು ಎದ್ದು ಎಲ್ಲ ದಿಕ್ಕುಗಳಲ್ಲೂ ಹರಡಿಕೊಳ್ಳುವುದು ; ಹೊಟ್ಟೆ ಕಡೆಗೆ ಹೋಗಬಹುದು, ಆದರೆ ಎಡತೋಳಿಗೆ ಹರಡುವುದೇ ಸಾಮಾನ್ಯ. ಇದರೊಂದಿಗೆ, ಎದೆ ಕಿವುಚಿ ಉಸಿರು ಸಿಕ್ಕಿಕೊಂಡಂತೆ ರೋಗಿ ನರಳುತ್ತಾನೆ. ಉಸಿರಾಟಕ್ಕಂತೂ ಏನೂ ತೊಂದರೆ ಇಲ್ಲ. ರೋಗಿ ಹಾಗೇ ಸೆಡೆತುಕೊಂಡು ಅಲುಗಾಡದೆ ನಿಲ್ಲುತ್ತಾನೆ. ಹಣೆ ತುಂಬ ಬೆವರು ಹನಿಗಳೇಳುತ್ತವೆ. ಬಿಳಿಚುತ್ತಾನೆ, ನಾಡಿ ದುರ್ಬಲವಾಗುತ್ತದೆ. ಇನ್ನೇನು ಸಾಯುವೆ ಎಂದುಕೊಳ್ಳುತ್ತಾನೆ. ರಕ್ತದ ಒತ್ತಡ ಏರುತ್ತದೆ. ಹೀಗೆ ಸುಸ್ತಾಗಿ ಕೆಲವು ಸೆಕೆಂಡುಗಳೂ ನಿಮಿಷಗಳೂ ಇರುವಲ್ಲೇ ದಣಿವಾರಿಸಿಕೊಂಡ ಮೇಲೆ, ಶೂಲೆಯ ಕೆರಳು ಇಳಿದುಹೋಗಿ, ಅಷ್ಟೇ ಬೇಗನೆ ಚೇತರಿಸಿಕೊಳ್ಳುತ್ತಾನೆ. ಕಿರೀಟಿಕ ಧಮನಿಯಲ್ಲಿ ರೋಗ ಹರಡಿ ಅಡಚಣೆ ಹೆಚ್ಚಿದಂತೆಲ್ಲ, ಬರುಬರುತ್ತ ಕೊಂಚ ನಡೆದರೇ ರೋಗಿಗೆ ಎದೆ ಸೆರೆಬಿಗಿತದ ಶೂಲೆ ತಲೆದೋರುವುದು. ಸಿಟ್ಟು, ಮುನಿಸು, ಚಿಂತೆಗಳಿಂದಲೂ ಹೀಗೆ ಕೆರಳಬಹುದು. ನಡು ವಯಸ್ಸಿಗೆ ಮುಂಚೆ ಅಷ್ಟಾಗಿ ಇದು ಕಾಣಿಸದು. ಹೆಂಗಸರಿಗಿಂತಲೂ ಗಂಡಸರಲ್ಲಿ ಹೆಚ್ಚು, ಬೇರೆಡೆಗಳ ಸ್ನಾಯುಗಳ ರಕ್ತ ಹರಿವಿನ ಕೊರೆ ಆದಾಗ ಉಳುಕು ಹಿಡಿದು ನೋವಿಡುವ ಹಾಗೇ ಎದೆ ಸೆರೆಬಿಗಿತ ಗುಂಡಿಗೆಯ ಸ್ನಾಯುವಿನ ಉಳುಕಿನ ಶೂಲೆಗೂ ಕಾರಣ. ಈ ಶೂಲೆ ಎಂದಿನಂತಿದ್ದರೆ, ಸಾಮಾನ್ಯ ವೈದ್ಯನಿಗೂ ಕಾರಣ ಗೊತ್ತಾಗುವುದು ಕಷ್ಟವಲ್ಲ. ಆದರೆ ಕೆಲವೇಳೆ ಇದು ಇಷ್ಟು ಸರಳವಾಗಿ ನೇರವಾಗಿರದು. ಆಗ ಗುಂಡಿಗೆಯ ವೈದ್ಯಪಟುವಿಂದಲೇ ಖಚಿತವಾಗಬೇಕು.
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ